ಕಾರ್ಕಳದ ಇತಿಹಾಸ ಮತ್ತು ಕೆಲವು ಪ್ರೇಕ್ಷಣೀಯ ಸ್ತಳಗಳು

July 21st, 2010

(ಇಲ್ಲಿರುವ ಮಾಹಿತಿಯನ್ನು http://en.wikipedia.org/wiki/Karkala ದಿಂದ ಆರಿಸಲಾಗಿದೆ)


ಕಾರ್ಕಳ (Karkala) ಉಡುಪಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಕಾರ್ಕಳವು ಬೆಂಗಳೂರಿನಿಂದ ಸೂಮಾರು 300 ಕೀ.ಮಿ ದೂರದಲ್ಲಿದೆ ಪಶ್ಚಿಮ ಘಟ್ಟದ ಬುಡದಲ್ಲಿರುವ ಈ ಊರು ಜೈನರ ಕಾಲದಲ್ಲಿ ಪಾಂಡ್ಯ ನಗರಿ ಎಂದು ಪ್ರಸಿಧ್ದಿ ಪಡೆದಿತ್ತು. ನಂತರ ಇಲ್ಲಿರುವ ಕರಿಬಂಡೆಗಳಿಂದ “ಕರಿಕಲ್ಲು” ಎಂದು ಜನಜನಿತವಾಗಿತ್ತು. ವತ೯ಮಾನದಲ್ಲಿ ಏಕ ಶಿಲಾ ಗೊಮ್ಮಟೇಶ್ವರ ಮೂಲಕ ವಿಶ್ವಶಾಂತಿಯನ್ನು ಸಾರುತ್ತ “ಕಾರ್ಕಳ″ ಎಂದು ಕರೆಯಲ್ಪಡುತ್ತಿದೆ.

karkalakarkala


ಕಾಕ೯ಳದ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿ ದೊರಕದಿದ್ದರು ಸೂಮಾರು ೧೦ನೇ ಶತಮಾನದ ಆದಿಯಿಂದ ಹಲವು ಮಾಹಿತಿಗಳು ಲಬ್ಯವಿದೆ. ಕಾರ್ಕಳದಲ್ಲಿ ಜನಜೀವನ ಎಂದು ಆರಂಭವಾಯಿತು ಎಂಬುದಕ್ಕೆ ಅನಾದಿಕಾಲದ ಆಧಾರಗಳು ನಮಗೆ ಸಿಗುತ್ತಿಲ್ಲವಾದರೂ ಬೃಹತ್ ಶಿಲಾಯುಗಕ್ಕೆ ಕಾಲಿಟ್ಟಾಗ ಒಂದು ಸ್ಪಷ್ಟ ಚಿತ್ರ ದೊರೆಯುತ್ತದೆ. ತತ್ಸಂಬಂಧವಾದ ಹಲವಾರು ಪಳೆಯುಳಿಕೆಗಳು ಕಾಣಸಿಗುತ್ತವೆ. ಇಲ್ಲಿ ಹೆಸರಿಸಬಹುದಾವುಗಳೆಂದರೆ ಗವಿಗಳು ಮತ್ತು ಸಮಾಧಿಗಳು.ಇಲ್ಲಿನ ಹಿರಿಯಂಗಡಿ ಬಳಿ ಇರುವ ಪರ್ಪಲೆ ಬೆಟ್ಟದ ಮಧ್ಯಭಾಗದಲ್ಲಿ ಒಂದು ಗವಿ ಇದೆ.ಪೂರ್ವಕ್ಕೆ ಮುಖವಿರುವ ಈ ಮುರಕಲ್ಲು ಗವಿ ಬೃಹತ್ ಶಿಲಾಯುಗದ್ದು. ಕಾಲದ ಪ್ರಭಾವದಿಂದಾಗಿ ಆದ ಹಲವಾರು ಬದಲಾವಣೆಗಳನ್ನು ನಾವು ಇಲ್ಲಿ ಕಾಣಬಹುದು. ಗವಿಯ ಮುಂದೆ ಕಿರಿದಾದ ಸಣ್ಣ ಕಣಿವೆ, ಇಲ್ಲೊಂದು ಅಷ್ಟೇ ಸಣ್ಣದಾದ ಝರಿ. ಇದು ಪ್ರಾಚೀನ ಕಾಲದಲ್ಲಿ ಮಾನವ ವಾಸ್ತವ್ಯಕ್ಕೆ ಅತ್ಯಂತ ಸೂಕ್ತವಾದ ಸ್ಥಳವಾಗಿತ್ತು. ಆಧುನಿಕ ಮಾನವನ ಸಂಪರ್ಕ ಹೊಂದಿರುವ ಈ ಗವಿ ಇದ್ದಿರಬಹುದಾದ ಪಳೆಯುಳಿಕೆಗಳನ್ನು ತನ್ನ ಗರ್ಭದಲ್ಲಿ ಸೇರಿಸಿಕೊಂಡಿದೆ. ಬೆಳುವಾಯಿ ಸಮೀಪದ ದರೆಗುಡ್ಡೆ ಮತ್ತು ಬೈಲೂರು ಸಮೀಪದ ಕಣಜಾರು ಬೆಟ್ಟ ಪ್ರದೇಶಗಳಲ್ಲಿ ಹೆಬ್ಬಂಡೆ ವಾಸ್ತವ್ಯದ ಕುರುಹುಗಳಿವೆ. ಇಲ್ಲಿ ಬೃಹತ್ ಶಿಲಾಯುಗಕ್ಕೂ ಹಿಂದಿನ ಕಾಲದ ಮಾನವ ವಾಸವಾಗಿದ್ದಿರಬಹುದು. ಸಾವಿರಾರು ವರ್ಷಗಳ ಘನಘೋರ ವರ್ಷಧಾರೆಯಿಂದ ಇಲ್ಲಿನ ಕುರುಹುಗಳು ನಾಶವಾಗಿವೆ. ರೆಂಜಾಳದ ಸಮೀಪ ಇರುವ ಬೋರುಕಟ್ಟೆ ಎಂಬ ಹಳ್ಳಿಯಲ್ಲಿ ಒಂದು ಬೃಹತ್ ಶಿಲಾ ಸಮಾಧಿ ಇದೆ. ಇದನ್ನು ಅಲ್ಲಿನ ಜನ “ಪಾಂಡವರಕಲ್ಲು ” ಎಂದು ಕರೆಯುತ್ತಾರೆ. ಈ ಹೆಸರು ಸಮಾದಿಯ ಪ್ರಾಚೀನತೆಯನ್ನು ಸೂಚಿಸುತ್ತದೆ ಅಷ್ಟೇ.ಜಿಲ್ಲೆಯ ಇತರೆಡೆಗಳಲ್ಲೂ “ ಪಾಂಡವರಕಲ್ಲು ” ಎಂದು ಕರೆಸಿಕೊಳ್ಳುವ ಸ್ಥಳಗಳಿವೆ.ಅಲ್ಲೆಲ್ಲಾ ಕಾಣಸಿಗಬಹುದು ಬೃಹತ್ ಶಿಲಾ ಸಮಾಧಿಗಳು.ಬೋರುಕಟ್ಟೆ ಸಮಾಧಿಯು ಸಣ್ಣ ರಂಧ್ರದ ಸಮಾಧಿ. ಇದರ ಮೇಲೆ ತೆಳುವಾದ ಕಲ್ಲು ಚಪ್ಪಡಿಗಳ ಒಂದು ಚಪ್ಪರ ಇದೆ.ಮಾನವ ಆ ವೇಳೆಗೆ ಲೋಹದ ಮುಖ್ಯವಾಗಿ, ಕಬ್ಬಿಣದ ಉಪಯೋಗ ಪಡೆದಿದ್ದನೆಂಬುದಕ್ಕೆ ಇದು ಸಾಕ್ಷಿ.ಇಲ್ಲಿನ ಬೃಹತ್ ಶಿಲಾಯುಗದ ಸ್ಮಾರಕಗಳು ಸುಮಾರು ಕ್ರಿ.ಪೂ.4ನೆಯ ಶತಮಾನ ಮತ್ತು ಅನಂತರದ ಕಾಲವೆಂದು ಅಂದಾಜಿಸಬಹುದು. ಆದರೆ ವೈಜ್ಞಾನಿಕವಾಗಿ ಉತ್ಖನನ ಕಾರ್ಯ ನಡೆಯುವವರೆಗೆ ಈ ಕಾಲವನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ.


ಪಡುತಿರುಪತಿ ಶ್ರೀ ವೆಂಕಟರಮಣ ದೇವಾಲಯ

Karkala Venkatramana Temple PadutirupatiLord Venkataramana


ಸಾಂಪ್ರದಾಯಿಕ ಶೈಲಿಯ ಕಟ್ಟಡ ನಿರ್ಮಾಣವು ಈ ದೇವಾಲಯದ ವಿಶೆಶತೆಯಾಗಿದೆ. ಪ್ರತಿ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ವೆಂಕಟರಮಣ ದೇವರ ದರ್ಶನ ಪಡೆಯುತ್ತಾರೆ. ಪ್ರತ್ಯೇಕವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ಭಕ್ತರು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಈ ದೇವಾಲಯವನ್ನು ಪಡುತಿರುಪತಿ (ಪಶ್ಚಿಮದ ತಿರುಪತಿ) ಎಂದು ಕರೆಯುವುದೂ ಉಂಟು. ಗೌಡ ಸರ್‌ಸ್ವಾತ ಬ್ರಾಹ್ಮಣರಿಗೆ ಇದು ಪ್ರಮುಖ ಪುಣ್ಯ ಕ್ಶೆತ್ರವಾದರೆ, ಅನ್ಯ ಜಾತಿಯರೂ ಬಂದು ಇಲ್ಲಿ ವೆಂಕಟರಮಣ ದೇವರ ದರ್ಶನ ಪಡೆಯುತ್ತಾರೆ. ಪುರಾಣದ ಪ್ರಕಾರ ಗೌಡ ಸರ್‌ಸ್ವಾತ ಬ್ರಾಹ್ಮಣ ಪರಿವಾರಕ್ಕೆ ಸೇರಿದ ಸೊಯ್ರೆ ಪ್ರಭು ಮತ್ತು ಸೋಮ ಶರ್ಮ ಇವರು ಗೋವಾದಿಂದ ಇಲ್ಲಿಗೆ ವಲಸೆ ಬಂದು ವೆಂಕಟರಮಣ ದೇವರ ವಿಗ್ರಹವನ್ನು  ಪ್ರತಿಷ್ಟಾಪಿಸಿದ್ದಾರೆ. (ಕ್ರಿ.ಶ. 1450 ರಲ್ಲಿ ಗೋವಾದಲ್ಲಿ ಪೋರ್ಚುಗಿಸರ ಪ್ರಾಬಲ್ಯತೆ ಇತ್ತು). ಇಲ್ಲಿ ಪ್ರತಿಷ್ಟಾಪಿಸಲ್ಪಟ್ಟಿರುವ ಶ್ರೀನಿವಾಸ ದೇವರ ವಿಗ್ರಹವನ್ನು ತಿರುಮಲ ತಿರುಪತಿಯಿಂದ ತಂದದ್ದೆಂಬ ನಂಬಿಕೆಯೂ ಇದೆ.

ವೀರ ಮಾರುತಿ ದೇವಾಲಯ

Karkala Veera Maruti TempleVeera Maruti

ವೆಂಕಟರಮಣ ದೇವಾಲಯದ ಮುಂದೆ ಇರುವ ವೀರ ಮಾರುತಿ ದೇವಾಲಯವು ಇಲ್ಲಿರುವ 15 ಅಡಿ ಎತ್ತರದ ವೀರ ಮಾರುತಿ ವಿಗ್ರಹಕ್ಕೆ ಪ್ರಸಿದ್ದಿಯಾಗಿದೆ. 1539 ರಲ್ಲಿ ನಿರ್ಮಾಣಗೊಂಡ ಈ ದೇವಾಲಯವು 1972 ರಲ್ಲಿ ಜೀರ್ಣೋದ್ದಾರ ಗೊಂಡಿತ್ತು. ಇಲ್ಲಿರುವ ಹನುಮಾನ್ ವಿಗ್ರಹವು ಆನೆಕೆರೆಯ ಅಗೆಯುವಿಕೆ ಕಾರ್ಯದಲ್ಲಿ ಸಿಕ್ಕಿತೆಂಬ ನಂಬಿಕೆ ಇದೆ. ಈ ಹನುಮಾನ್ ವಿಗ್ರಹವು ತನ್ನ ವೈಶಿಷ್ಟ್ಯಪೂರ್ಣವಾದ ಶಿಲ್ಪ ನಿರ್ಮಾಣಕ್ಕೆ ಹೆಸರುವಾಸಿಯಾಗಿದೆ.  ಸೊಂಟದ ಮೇಲಿರುವ ಎಡ ಕೈ, ಮೆಲ್ಮುಖವಾಗಿರುವ ಬಲ ಕೈ, ನಡೆದಾಡುವ ಭಂಗಿಯಲ್ಲಿರುವ ಕಾಲುಗಳು, ದುರುಗುಟ್ಟುವ ತೀಕ್ಷ್ಣ ನೋಟದ ಕಣ್ಣುಗಳು, ಗಾಳಿಯಲ್ಲಿ ತೇಲುವ ತಲೆಗೂದಲು. ಟಿಪ್ಪು ಸುಲ್ತಾನನು ಇಲ್ಲಿರುವ ಹನುಮಂತನ ಪ್ರಮುಖ ಭಕ್ತರಲ್ಲಿ ಒಬ್ಬನಾಗಿದ್ದ. ಆತನು ನೀಡಿದ ಬೆಳ್ಳಿ ಆಭರಣವನ್ನು ಇಂದಿಗೂ ವಿಗ್ರಹದ ಕೊರಳಲ್ಲಿ ಕಾಣಬಹುದು.

ಅತ್ತೂರು ಚರ್ಚ್

Attur ChurchAttur Church

ಈ ದೇವಾಲಯವೂ ಕಾರ್ಕಳದಿಂದ ಸುಮಾರು 2 ಕಿ. ಮೀ. ದೂರದಲ್ಲಿರುವ ಪರ್ಪಲೆ ಬೆಟ್ಟದ ಪಕ್ಕದಲ್ಲಿ ನಿರ್ಮಾಣಗೊಂಡಿದೆ. ಕ್ರಿ. ಶ. 1759 ರಲ್ಲಿ ಮೂಲ ದೇವಾಲಯವು ಇಲ್ಲಿಂದ ಸುಮಾರು 7 ಕಿ. ಮೀ. ದೂರದಲ್ಲಿ ನಿರ್ಮಾಣಗೊಂಡಿತ್ತು. ಟಿಪ್ಪು ಸುಲ್ತಾನಾನಿಂದ ಧ್ವಂಸಗೊಂಡ ಈ ದೇವಾಲಯವು 1801 ರಲ್ಲಿ ಗೋವಾದ ಪಾದ್ರಿಯ ನೇತ್ರತ್ವದಲ್ಲಿ ಪುನರ್ ನಿರ್ಮಾಣ ಗೊಂಡಿತ್ತು. ಪ್ರಸ್ತುತ ಉತ್ತರಭಿಮುಖವಾಗಿರುವ ಈಗಿನ ದೇವಾಲಯವು 1900 ರಲ್ಲಿ ನಿರ್ಮಾಣಗೊಂಡು 22 ಜನವರಿ 1901 ರಲ್ಲಿ ಉದ್ಘಾಟನೆ ಗೊಂಡಿತ್ತು. 2000 ನೇ ಇಸವಿಯಲ್ಲಿ ನೂತನ ಕಟ್ಟಡವು ಹಳೆಯ ಕಟ್ಟಡದ ಮುಂಭಾಗದಲ್ಲಿ ನಿರ್ಮಾಣಗೊಂಡಿತು. ಹಳೆಯ ಕಟ್ಟಡವು ಇಂದಿಗೂ ಅದೇ ಸ್ಥಾನದಲ್ಲಿದೆ.

ಚತುರ್ಮುಖ ಬಸದಿ

Chaturmukha BasadiChaturmukha Basadi

ನಾಲ್ಕೂ ದಿಕ್ಕುಗಳಿಂದಲೂ ಅನುರೂಪವಾಗಿರುವ ಈ ಜೈನ ದೇವಾಲಯವು ಭವ್ಯ ಕಲ್ಲಿನ ಬೆಟ್ಟದ ಮೇಲೆ ನಿರ್ಮಾಣ ಗೊಂಡಿದೆ. ಕ್ರಿ. ಶ. 1432 ರಲ್ಲಿ ವೀರ ಪಾಂಡ್ಯರು ಅರಸರ ಕಾಲದಲ್ಲಿ ನಿರ್ಮಿಸಲ್ಪಟ್ಟ ಈ ಕಟ್ಟಡವು 1586 ರಲ್ಲಿ ಪೂರ್ಣಗೊಂಡಿತು. ಭವ್ಯ ದ್ವಾರಗಳೊಂದಿಗೆ ಕಲ್ಲಿನ ಮಂಟಪದಂತಿರುವ ಈ ಕಟ್ಟಡವು ಚತುರ್ಭುಜಾಕ್ರತಿಯಲ್ಲಿ ನಿರ್ಮಾಣಗೊಂಡಿದೆ. ಗರ್ಭಗ್ರಹದಲ್ಲಿರುವ ಅರ, ಮಲ್ಲಿ ಮತ್ತು ಸುಯ್ರಾತ ಇವರ ಆಳೆತ್ತರದ ಮೂರ್ತಿಗಳನ್ನು ಕಟ್ಟಡದ ನಾಲ್ಕೂ ದ್ವಾರಗಳಿಂದ ನೋಡಬಹುದು. 24 ಜೈನ ತೀರ್ಥಂಕರರ ಹಾಗೂ ಯಕ್ಷಿ ಪದ್ಮಾವತಿಯ ಸುಂದರ ಕೆತ್ತನೆಯನ್ನು ಇಲ್ಲಿ ನೋಡಬಹುದಾಗಿದೆ. ಕಲ್ಲಿನ ಮಂಟಪದಂತಿರುವ ಈ ಭವ್ಯ ಕಟ್ಟಡವು 108 ಕಲ್ಲಿನ ಸ್ಥಂಭಗಳ ಆದಾರದ ಮೇಲೆ ನಿಂತಿದೆ.

ಅನಂತಶಯನ ದೇವಸ್ಥಾನ

AnanthashayanaAnanthashayana

ಈ ದೇವಾಲಯವು 1567 ರಲ್ಲಿ ಜೈನ ಅರಸರ ಕಾಲದಲ್ಲಿ ಜೈನರ ಪ್ರಮುಖ ಬಸದಿಯಾಗಿತ್ತು. ಇದೇ  ಕಾಲದಲ್ಲಿ ಇಲ್ಲಿಗೆ ಆಗಮಿಸಿದ ಶೃಂಗೇರಿ ಜಗದ್ಗುರು ಶ್ರೀ ನರಸಿಂಹ ಭಾರತಿ ಸ್ವಾಮಿಜಿಯವರಿಗೆ ಇಲ್ಲಿನ ಜೈನ ಅರಸರು ಸ್ವಾಗತಿಸಿ ಬಸದಿಯಲ್ಲಿ ನಿಲ್ಲುವ ವ್ಯವಸ್ತೆಯನ್ನು ಕಲ್ಪಿಸಿದರು. ಸ್ವಾಮಿಜಿಯವರ ಅಪೇಕ್ಷೆಯಂತೆ ಜೈನ ಅರಸರು ಬಸದಿಯಲ್ಲಿ ನಿದ್ರಸೀನದಲ್ಲಿರುವ ವಿಷ್ಣುವಿನ ವಿಗ್ರಹವನ್ನು ಪ್ರತಿಷ್ಟಾಪಿಸಿದರು. ವಿಷ್ಣವಿನ ನಾಭಿಯಿಂದ ಹೊರಬಂದು ಕಮಲದ ಮೇಲೆ ಆಸಿನರಾಗಿರುವ ಬ್ರಹ್ಮನ ಈ ವಿಗ್ರಹವು ಏಕ ಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ಆತನ ಪತ್ನಿಯರಾದ ಶ್ರೀದೇವಿ ಮತ್ತು ಭೂದೇವಿಯನ್ನು ಪಾದದ ಮೇಲೆ ಆಸೀನರಾಗಿರುವುದನ್ನು ನೋಡಬಹುದು. ದೆವಸ್ತಾನದ ಪ್ರತಿ ಮೂಲೆಯಲ್ಲಿ ಪುರಾತನ ವಿಗ್ರಹಗಳನ್ನು ಕಾಣಬಹುದು.

ಶ್ರೀ ಕಾಳಿಕಾಂಬ ದೇವಸ್ಥಾನ

KalikambaDeepotsava

ಶ್ರೀ ಕಾಳಿಕಾಂಬ ದೇವಸ್ಥಾನವು ಇಲ್ಲಿನ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಇದನ್ನು 11ನೇ ಅಥವ 12ನೇ ಶತಮಾನದಲ್ಲಿ ಪ್ರಖ್ಯಾತ ಶಿಲ್ಪಿ ಅರ್ಕಾಸಾಲಿ ಭುಜಂಗಾಚಾರ್ಯರು ಕಟ್ಟಿರಬಹುದೆಂದು ಅಂದಾಜಿಸಲಾಗಿದೆ.  ಕುಳಿತ ಭಂಗಿಯಲ್ಲಿರುವ ದೇವಿಯ ವಿಗ್ರಹದ ಕೈಯಲ್ಲಿ ಖಡ್ಗ, ಚಕ್ರ, ಹಣ್ನುಹಂಪಲು ಮತ್ತು ನಾಲ್ಕೂ ಕೈಯಲ್ಲಿ ಅಭಯ ಮುದ್ರೆಯನ್ನು ನೋಡಬಹುದಾಗಿದೆ. 1981 ರಲ್ಲಿ ನವೀಕರಣಗೊಂಡ ಈ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವಾವೂ ನೆರವೇರಿತ್ತು.

ಬಾಹುಬಲಿ ಮೂರ್ತಿ

BahubaliAnekere


ವೀರ ಭೈರವ ಅರಸನ ಕಾಲದಲ್ಲಿ ಕಾರ್ಕಳದಲ್ಲಿ ಅನೇಕ ಜೈನ ಬಸದಿಗಳು ನಿರ್ಮಾಣಗೊಂಡವು. ರಾಮನಾತ ಮತ್ತು ವೀರ ಪಾಂಡ್ಯರು ಈತನ ಸುಪುತ್ರರಾಗಿದ್ದರು. ರಾಮನಾತನು ತಂದೆಯ ಕಾಲದಲ್ಲಿಯೇ ಕೊನೆಯುಸಿರೆಳೆದನು. ಈತನ ಸ್ಮರಣಿಕೆಗೆ ನಿರ್ಮಾಣಗೊಂಡ ಪ್ರಕ್ರತಿ ರಮಣೀಯ ಅನೆಕೆರೆಯು ಇಂದಿಗೂ ಸ್ವಸ್ತಿತಿಯಲ್ಲಿದೆ. ಫೆಬ್ರವರಿ 13 1432 ರಲ್ಲಿ ಅರಸ ವೀರಪಾಂಡ್ಯರು ತನ್ನ ಪೂಜ್ಯ ಗುರುಗಳಾದ ಲಲಿತಕೀರ್ತಿಯವರ ಒತ್ತಾಯದ ಮೇರೆಗೆ ಏಕ ಶಿಲೆಯ ಬಾಹುಬಲಿಯ 42 ಆಡಿ ಎತ್ತರದ ಬ್ರಹತ್ ಮೂರ್ತಿಯನ್ನು ವಿಶಾಲವಾದ ಒಂದು ಬೆಟ್ಟದ ತುದಿಯ ಮೇಲೆ ಪ್ರತಿಷ್ಟಾಪಿಸಿದನು. 1436 ರಲ್ಲಿ ವೀರಪಾಂಡ್ಯರು ಮೂರ್ತಿಯ ಮುಂಭಾಗದಲ್ಲಿ ಬ್ರಹ್ಮದೇವ ಸ್ಥಂಭವನ್ನೂ ಪ್ರತಿಷ್ಟಾಪಿಸಿದರು. ವೀರ ಪಾಂಡ್ಯರ ನಂತರ ಪಟ್ಟವನ್ನೇರಿದ ಅಬಿನವ ಪಾಂಡ್ಯರು ಹಿರಿಯಂಗಡಿಯ ನೇಮಿನಾತ ಬಸದಿಯ ಮುಂಭಾಗದಲ್ಲಿ ಸುಂದರ ಕೆತ್ತನೆಯನ್ನು ಹೊಂದಿರುವ ಮಾನಸ್ಥಂಭವನ್ನು ಪ್ರತಿಷ್ಟಾಪಿಸಿದರು. ನೇಮಿನಾತ ಬಸದಿಯು 1946 ರಲ್ಲಿ ನವೀಕರಣಗೊಂಡಿತು. 1545 ರಲ್ಲಿ ಅಬಿನವ ಪಾಂಡ್ಯರ ನಂತರ ಪಟ್ಟವನ್ನೇರಿದ ಆರನೇ ಪಾಂಡ್ಯರು ಅನೆಕೆರೆಯ ಹ್ರದಯ ಭಾಗದಲ್ಲಿ ಜೈನ ಬಸದಿಯನ್ನು ನಿರ್ಮಿಸಿದರು. ಇದೇ ಕೆರೆಯಲ್ಲಿ ಅರಸರ ಆನೆಗಳಿಗೆ ಜಲ ಸ್ನಾನವನ್ನು ನೀಡಲಾಗುತಿತ್ತು.
ಪ್ರತಿ 12 ವರ್ಷಕೊಮ್ಮೆ ಬಾಹುಬಲಿಗೆ ವಿಜ್ರಾಂಭಣೆಯ ಮಹಾ ಮಸ್ತಕಾಭಿಶೇಕವು ನೆರವೇರುತ್ತದೆ. ಮುಂದಿನ ಮಹಮಸ್ತಕಾಭಿಶೇಕವು 2014 ರಲ್ಲಿ ನಡೆಯಲಿದೆ.

Vijay Karla Places , , , , , , , ,